ಕಾಟನ್ ಮಾರ್ಕೆಟ್ ಲೀಜ್ ಮುಂದುವರಿಕೆ…

ಬಾಗಲಕೋಟೆ: ನಗರದ ಜನತೆ ಮರೆತೆ ಹೋಗಿದ್ದ ಕಾಟನ್ ಮಾರ್ಕೆಟ್ ವಿಷಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದ್ದೆ ತಡ, ಸಭೆ ರಣಾಂಗಣವಾಗಿ ಪರಿಣಮಿಸಿತು. ಆಡಳಿತ ಮತ್ತು ಪ್ರತಿಪಕ್ಷ‌ ಸದಸ್ಯರ‌ ನಡುವೆ ಮಾತಿನ ಚಕಮಕಿ ಶುರುವಾಗಿ ಆರೋಪ, ಪ್ರತ್ಯಾರೋಪಗಳಿಗೆ ಅಖಾಡವಾಗಿ ಪರಿಣಮಿಸಿತು.

ಏರುಧ್ವನಿ, ಪರ ವಿರೋಧ ಮಾತು:

ನಗರದ ಆಯ ಕಟ್ಟಿನ‌ ಪ್ರದೇಶವಾಗಿರುವ‌ ಕಾಟನ್ ಮಾರ್ಕೆಟ್‌ ಲೀಜ್‌ ಮುಂದುವರಿಸುವ ಕುರಿತ ವಿಷಯ ಪ್ರಸ್ತಾಪವಾಗುತ್ತಲೇ ಸದಸ್ಯರ‌ ನಡುವೆ ಪರ,‌ವಿರೋಧದ ಏರುಧ್ವನಿ ವ್ಯಕ್ತವಾಗತೊಡಗಿತು. ಲೀಜ್ ಮುಂದುವರಿಕೆ ಇಲ್ಲವೆ ನಗರಸಭೆ ಸ್ವಾಧೀನಕ್ಕೆ ತೆಗೆದುಕೊಳ್ಳುವುದರಿಂದ ಆಗುವ ಸಾಧಕ‌ – ಬಾಧಕಗಳ ಬಗೆಗೆ ಏರು ಧ್ವನಿಯಲ್ಲಿ ಮಾತನಾಡಿದ ಸದಸ್ಯರಾರೂ ಗಂಭೀರ ಚರ್ಚೆ ಮಾಡಲಿಲ್ಲ. ಆಡಳಿತ ಪಕ್ಷದ ಸದಸ್ಯರು ಲೀಜ್ ಮುಂದುವರಿಸಿ ಎಂದು ಪಟ್ಟು ಹಿಡಿದರೆ, ಪ್ರತಿಪಕ್ಷ ಸದಸ್ಯರು ಲೀಜ್ ಮುಂದುವರಿಸುವುದು ಬೇಡ ಎನ್ನುವ ಹಠಕ್ಕೆ ಜೋತು ಬಿದ್ದು ಕಾಲಹರಣ ಮಾಡಿದರು.

ನೂರಾರು ಕೋಟಿ ರೂ.‌ಮೌಲ್ಯದ ನಗರಸಭೆ ಆಸ್ತಿ ಇದಾಗಿದ್ದು ಇದನ್ನು ಲೀಜ್ ದಾರರಿಗೆ ಮುಂದುವರಿಸುವುದರಿಂದ ನಗರಸಭೆಗೆ ಏನು ಪ್ರಯೋಜನವಾಗಲಿದೆ ಎಂದು ವಿವರಿಸುವ ಗೋಜಿಗೆ ಯಾವ ಸದಸ್ಯರೂ ಮುಂದಾಗಲಿಲ್ಲ. ಆದರೆ ಪ್ರತಿಪಕ್ಷ ಸದಸ್ಯರು ಲೀಜ್ ಮುಂದುವರಿಸದೇ, ಆಸ್ತಿಯನ್ನು ಕಾನೂನು ಪ್ರಕಾರ ನಗರಸಭೆ ವಶಕ್ಕೆ ಪಡೆಯಬೇಕು. ಆ ಮೂಲಕ ನಗರಸಭೆ ಆಸ್ತಿಯನ್ನು ನಗರಸಭೆಗೆ ಉಳಿಸಿಕೊಂಡು, ಸಾಮಾಜಿಕ ನ್ಯಾಯದಡಿ ಲಿಲಾವು ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.

ನೂರಾರೂ ಕೋಟಿ ರೂ. ಆಸ್ತಿ:

ನೂರಾರೂ ಕೋಟಿ ರೂ.ಗಳ ನಗರಸಭೆ ಆಸ್ತಿ ಅನಾಯಾಸವಾಗಿ ಶ್ರೀಮಂತರ ಪಾಲಾಗಲು ಬಿಡಬಾರದು. ಜನ ಸಾಮಾನ್ಯರೂ ಅಲ್ಲಿ ವ್ಯಾಪಾರ, ವಹಿವಾಟು ಮಾಡಲು ಅವಕಾಶ ಸಿಗಬೇಕು ಎನ್ನುವ ವಾದವನ್ನು ಪ್ರತಿಪಕ್ಷದ ಸದಸ್ಯರು ಬಲವಾಗಿ ಪ್ರತಿಪಾದಿಸಿದರು. ಆದರೆ ಆಡಳಿತ ಪಕ್ಷದ ಸದಸ್ಯರು‌ ಮಾತ್ರ ಲೀಜ್ ಮುಂದುವರಿಕೆಗೆ ಬಹುತೇಕ ಸದಸ್ಯರ ಬೆಂಬಲವಿದೆ. ಬಹುಮತದ ಆಧಾರದ ಮೇಲೆ ಲೀಜ್ ಮುಂದುವರಿಸುವ ಬಗೆಗೆ ಠರಾವು ಪಾಸ್ ಮಾಡುವಂತೆ ಆಗ್ರಹಿಸಿ ತೊಡಗಿದರು.

ಚರ್ಚೆ ಬಳಿಕ ನಿರ್ಧಾರ:

ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಬಹುಹೊತ್ತು ವಾದ, ವಿವಾದ ನಡೆದ ಪರಿಣಾಮ ಗೊಂದಲದ ವಾತಾವರಣ ಸೃಷ್ಟಿ ಆಗಿತ್ತು. ಸದಸ್ಯರ ಗೊಂದಲದ ಪರಿಣಾಮ ಸಭೆ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಆಗ ಶಾಸಕ ಎಚ್.ವೈ.‌ ಮೇಟಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಾಧಕ-ಬಾಧಕಗಳ ಬಗೆಗೆ ಚರ್ಚಿಸಿ ಅಂತಿಮ‌ ನಿರ್ಣಯ ತೆಗೆದುಕೊಳ್ಳೋಣ ಎಂದಾಗ ಸಭೆಯಲ್ಲಿ ಮುಂದಿನ‌ ವಿಷಯಗಳ ಬಗೆಗೆ ಚರ್ಚೆ ಮುಂದುವರಿಯಿತು.

ಪ್ರತಿ ವಾರ್ಡಿಗೆ 8 ಲಕ್ಷ ರೂ.:

ಈ ವೇಳೆ ಶಾಸಕ ಎಚ್.ವೈ. ಮೇಟಿ ಅವರು ಶಾಸಕರ ವಿಶೇಷ ಅನುದಾನದಲ್ಲಿ ಪ್ರತಿ ವಾರ್ಡ್‌ಗೆ 8 ಲಕ್ಷ ರೂ. ಅನುದಾನ ನೀಡಲಾಗುವುದು. ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮುಳಗಡೆ ನಗರಿ ಬಾಗಲಕೋಟೆ ಸಮಗ್ರ ಅಭಿವೃದ್ಧಿಗೆ ಅನುದಾನ ಸದ್ಭಳಕೆ ಮಾಡಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಶೋಭಾರಾವ್ , ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ಶ್ರೀನಾಥ ಸಜ್ಜನ, ಶಶಿಕಲಾ ಮಜ್ಜಗಿ, ಬಸವರಾಜ ಅವರಾದಿ, ಸ್ಮೀತಾ ಪವಾರ, ರತ್ನಾ ಕೆರೂರ, ಹಾಜಿಸಾಬ ದಂಡಿನ, ತಿಪ್ಪಣ್ಣ ನೀಲನಾಯಕ, ಚನ್ನವೀರ ಅಂಗಡಿ, ಶಂಕರ ತಪಶೆಟ್ಟಿ, ಚನ್ನಯ್ಯ ಹಿರೇಮಠ, ನಗರಸಭೆ ಆಯುಕ್ತ ಆರ್. ವಾಸಣ್ಣ ಇದ್ದರು.

Scroll to Top