ಬಿಟಿಡಿಎ ಮೂಲೆ ನಿವೇಶನ ಲಿಲಾವು ಭಾಗ-2 ಶೀಘ್ರ ಆರಂಭ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ನವನಗರದ ನಾನಾ ಸೆಕ್ಟರ್ ಗಳಲ್ಲಿ ಮೂಲೆ ನಿವೇಶನಗಳನ್ನು ಹರಾಜು ಮಾಡಿ, ನವನಗರ ಅಭಿವೃದ್ಧಿಗಾಗಿ ಕೂಡಿಟ್ಟ ಸರಿ ಸುಮಾರು 370 ಕೋಟಿ ರೂ. ಹಣ ಸರ್ಕಾರದ ಪಾಲಾಗಿ ಎರಡು ವರ್ಷಗಳು ಕಳೆದಿವೆ. ಆ ಹಣ ಇಂದಿಗೂ ಬಿಟಿಡಿಗೆ ವಾಪಸ್ಸಾಗುತ್ತಿಲ್ಲ. ಇದರಿಂದ ಬಿಟಿಡಿಎ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸಲು ಸಾಕಷ್ಟು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಪಾಲಾಯ್ತು:

2023 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಟಿಡಿಎದಲ್ಲಿನ 370 ಕೋಟಿ ರೂ. ಕಾರ್ಪಸ್ ಫಂಡ್ ಸರ್ಕಾರ ಪಡೆದುಕೊಂಡಿತು. ಆಗ ಆ ಹಣ ಸರ್ಕಾರಕ್ಕೆ ಒಯ್ದದ್ದು ಯಾರ ಅವಧಿಯಲ್ಲಿ ಎನ್ನುವ ಗೊಂದಲ ಇನ್ನೂ ಹಾಗೆ ಇದೆ. ಅಂದು ಸರ್ಕಾರದಲ್ಲಿದ್ದವರು ಈಗಲೂ ಅದಕ್ಕೆ ಸ್ಪಷ್ಟ ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಅದಕ್ಕೊಂದು ಬಾರಿ ವಿವರಣೆ ಕೋಡೋಣ ಎನ್ನುತ್ತ ಪಲಾಯನವಾದದ ಹಾದಿ ಹಿಡಿದಿದ್ದಾರೆ. ಅಚ್ಚರಿ ಸಂಗತಿ ಎಂದರೆ ಏಕರೂಪ ದರ ನಿಗದಿ ವಿಷಯ ನಿಮ್ಮ ಕಾಲದಲ್ಲಿ ಏಕೆ ಇತ್ಯರ್ಥ ಪಡಿಸಲಾಗಿಲ್ಲ ಎನ್ನುವ ವಿಷಯದಲ್ಲೂ ಪಲಾಯನವಾದಕ್ಕೆ ಶರಣಾಗಿದ್ದಾರೆ.

ಇಂದಿಗೂ ವಾಪಸ್ಸಾಗಿಲ್ಲ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡುವರೆ ವರ್ಷ ಕಳೆಯುತ್ತ ಬಂದಿದೆ. ಸರ್ಕಾರ ಪಡೆದುಕೊಂಡಿರುವ ಕಾರ್ಪಸ್ ಫಂಡ್ ವಾಪಸ್ಸ್ ತರುತ್ತೇವೆ ಎನ್ನುವ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದಾರೆ. ಪರಿಣಾಮವಾಗಿ ಬಾಗಲಕೋಟೆ ನವನಗರಕ್ಕೆ ಅಗತ್ಯ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಕಸ ತೆಗೆಯಲೂ ದುಡ್ಡಿಲ್ಲದ ಪರಿಸ್ಥಿತಿ ಇದೆ.

ಏತನ್ಮಧ್ಯೆ ಇಂತಹ ದಯನೀಯ ಪರಿಸ್ಥಿತಿಯಲ್ಲಿ ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಚ್. ವೈ.‌ಮೇಟಿ ಅವರು ಮುಳುಗಡೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಶೀಘ್ರ ಮೂಲೆ ನಿವೇಶನ ಲಿಲಾವು ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಸಮಸ್ಯೆ ಏನೆಂದರೆ ಈಗಲೇ ಬಿಟಿಡಿಎದಲ್ಲಿ ಅಭಿವೃದ್ಧಿಗಾಗಿ ಕೂಡಿಟ್ಟ ಹಣವನ್ನು ಪಡೆದುಕೊಂಡ ಸರ್ಕಾರದಿಂದ ಮರಳಿ ತರಲಾಗುತ್ತಿಲ್ಲ. ಈಗ ಮತ್ತೊಮ್ಮೆ ಮೂಲೆ ನಿವೇಶನಗಳ ಲಿಲಾವು ಮಾಡಲು ಹೊರಟಿದೆ.

ಬೇಕಿದೆ ಮುನ್ನೆಚ್ಚರಿಕೆ :

ಬಿಟಿಡಿಎ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಿ, ಆ ಹಣವನ್ನು ಸ್ಥಳೀಯವಾಗಿ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪು ಕಾಣಿಸದು. ಆದರೆ ಕೂಡಿಟ್ಟ ಹಣದ ಮೇಲೆ ಸರ್ಕಾರ ಮತ್ತೆ ಕಣ್ಹಾಕದಂತೆ ಪರ್ಯಾಯ ಕ್ರಮಗಳ ಬಗೆಗೆ ಬಿಟಿಡಿಎ ಆಡಳಿತ ಮಂಡಳಿ ಗಂಭೀರ ಚಿಂತನೆ ನಡೆಸಬೇಕಿದೆ.

ಏಕೆಂದರೆ ಬಿಟಿಡಿಎ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವುದು. ಅದನ್ನು‌ ಸರ್ಕಾರ ತೆಗೆದುಕೊಂಡು ಹೋಗುವುದಾರೆ ಏನೂ ಪ್ರಯೋಜನವಾಗದು. ಮೂಲೆ ನಿವೇಶನಗಳ ಲಿಲಾವಿನಿಂದ ನಗರದ್ಯಾದಂತ‌ ನಿವೇಶನ ಬೆಲೆ ಹೆಚ್ಚಾಗಲಿವೆ ಎನ್ನುವುದನ್ನು ಬಿಟ್ಟರೆ ಮತ್ತೇನೂ ಪ್ರಯೋಜನವಾಗದು.

ಬಿಟಿಡಿಎ ಈ ಹಿಂದೆ ನಡೆಸಿದ ಮೂಲೆ ನಿವೇಶನಗಳ ಬಹಿರಂಗ ಲಿಲಾವಿನಲ್ಲಿ ಸ್ಥಳೀಯರಿಗಿಂತ ಇತರೆ ಜಿಲ್ಲೆಗಳ ಜನ ಹೆಚ್ಚಾಗಿ ಭಾಗವಹಿಸಿದ್ದರು ಎನ್ನುವುದು ಗಮನಾರ್ಹ. ಪರಿಣಾಮವಾಗಿ ಕೆಲ ನಿವೇಶನಗಳು ಕೋಟ್ಯಂತರ ರೂ.ಗಳಿಗೆ ಮಾರಾಟವಾದ ಉದಾಹರಣೆ ಇವೆ.

ಬರಿ ಸಂಗ್ರಹಣೆ ಕೆಲಸ ಆಗಬಾರದು:

ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಣ ಬಿಟಿಡಿಎ ಕೆಲಸ, ಅದನ್ನು ತೆಗೆದುಕೊಂಡು ಹೋಗುವುದು ಸರ್ಕಾರದ ಕೆಲಸ ಎನ್ನುವಂತಾಗಬಾರದು ಎನ್ನುವುದು ನಗರದ ಜನತೆಯ ಆಶಯವಾಗಿದೆ. ಸ್ಥಳೀಯವಾಗಿ ಕ್ರೋಢೀಕರಿಸಿದ ಸಂಪನ್ಮೂಲ ಸ್ಥಳೀಯವಾಗಿನ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಬಳಕೆ ಆದಲ್ಲಿ ಸಾರ್ಥಕ ಎನ್ನುವುದು ಜನತೆ ಅಭಿಮತವಾಗಿದೆ.

ಜನತೆಯ ಈ ಅಭಿಪ್ರಾಯಕ್ಕೆ ಕಾರಣವೂ ಇದೆ. ಸರ್ಕಾರಿಂದ ಬಿಟಿಡಿಗೆ ಅಗತ್ಯ ಹಣಕಾಸಿನ ನೆರವು ಸಿಗುತ್ತಿಲ್ಲವಾದ್ದರಿಂದ ನವನಗರ ಅಭಿವೃದ್ಧಿ ಕಾಣದೆ ಮೂಲ ಸೌಕರ್ಯಗಳ ಕೊರತೆಯಿಂದಲೂ ಬಳಲುತ್ತಿದೆ. ಆದರೆ ಮುಳುಗಡೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರಿಗಳು ಮತ್ತು ಏಜೆಂಟರ ಹಾವಳಿ ಇಂದಿಗೂ ತಪ್ಪಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ತು ಎನ್ನುವ ಗಾದೆಯ ಸ್ಥಿತಿ ಬಿಟಿಡಿಎದಲ್ಲಿದೆ ಎನ್ನುವುದು ದುರಾದೃಷ್ಟಕರ ಸಂಗತಿ.

  • ವಿಠ್ಠಲ ಆರ್. ಬಲಕುಂದಿ
Scroll to Top