ಏಕರೂಪ ಬೆಲೆ ನಿಗದಿ: ಕಾಂಗ್ರೆಸ್ಸಿಗೆ ಪೊಲಿಟಿಕಲ್ ಮೈಲೇಜ್

ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಚುನಾವಣೆ ಅಸ್ತ್ರವಾಗುತ್ತಲೇ ಬಂದಿರುವ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಒಂದು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಯುಕೆಪಿ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ ಬೆಲೆ ನಿಗದಿ ಆಗಿದೆ. ಇದನ್ನು ಭೂಮಿ‌ ಕಳೆದುಕೊಳ್ಳಲಿರುವ ರೈತ ಸಮೂಹ ಕೂಡ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅಸಾಧ್ಯ ಎನ್ನುವ ಯೋಜನೆ ಸಾಧ್ಯ ಎನ್ನುವ ವಿಶ್ವಾಸ ಮೂಡಲು ಕಾರಣವಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು ಹಂತ-2 ಪೂರ್ಣಗೊಂಡಿದ್ದು, ಸರ್ಕಾರಗಳ ವಿಳಂಬ ನೀತಿಯಿಂದ ಯೋಜನಾ ವೆಚ್ಚ ಬೃಹದಾಕಾರವಾಗಿ ಹೆಚ್ಚಿದ ಪರಿಣಾಮ ಹಂತ -3ರ ಅನುಷ್ಠಾನ ಅಸಾಧ್ಯ ಎನ್ನುವ ಮನೋಭಾವ ಜನರಲ್ಲಿ ಸಹಜವಾಗಿಯೇ ಮೂಡಿದೆ. ಇಂತಹ ಮನೋಭಾವ ಜನಮಾನಸದಲ್ಲಿ‌ ಬೇರೂರಿದ್ದರೂ ಯೋಜನಾ ಬಾಧಿತ ಪ್ರದೇಶದ ರೈತರ ಹೋರಾಟ ಮಾತ್ರ ನಿರಂತರವಾಗಿ ನಡೆಯುತ್ತಲೇ ಇತ್ತು.

ರಾಜಕೀಯ ಪಕ್ಷಗಳಿಗೆ ಚುನಾವಣೆ ಅಸ್ತ್ರವಾಯ್ತು: ಅಚ್ಚರಿಯ ಸಂಗತಿ ಎಂದರೆ ಯೋಜನಾನುಷ್ಠಾನ ವಿಳಂಬ ಮಧ್ಯೆ ಪ್ರಮುಖ ರಾಜಕೀಯ ಪಕ್ಷಗಳು ಯುಕೆಪಿ ವಿಷಯವನ್ನು ರಾಜಕೀಯ ದಾಳವಾಗಿಸಿಕೊಂಡು ಅಧಿಕಾರ ಗದ್ದುಗೆ ಹಿಡಿದ ಉದಾಹರಣೆಗಳು ಇವೆ. ಆದರೂ ರೈತರ ಹೋರಾಟದ ಕಿಚ್ಚು ಮಾತ್ರ ಹಾಗೆ ಇತ್ತು.

ರೈತರು ಹೋರಾಟದ ಹಾದಿ ಹಿಡಿದಾಗಲೆಲ್ಲ ಪಕ್ಷಾತೀತ ಬೆಂಬಲ ವ್ಯಕ್ತವಾಗುತ್ತಿತ್ತಾದರೂ ಇಚ್ಛಾಶಕ್ತಿ ಕೊರತೆ ಪರಿಣಾಮ ಯೋಜನೆ ನನೆಗುದಿಗೆ ಬೀಳುತ್ತ ಬಂದಿತು.

2023 ರ ಬಳಿಕ ಹೋರಾಟ ತೀವ್ರಗೊಂಡ ಪರಿಣಾಮ ಸದನದ ಒಳಗೂ, ಹೊರಗೂ ಯೋಜನೆ ಅನುಷ್ಠಾನ ಕುರಿತು ದೊಡ್ಡ ಪ್ರಮಾಣದ ಚರ್ಚೆ ಆರಂಭಗೊಂಡಿತು. ಸರ್ಕಾರದ ಪಾಲಿಗೆ ಇದು ಬಹದೊಡ್ಡ ಸವಾಲಾಗಿ ಪರಿಣಮಿಸಿತು. ಸರ್ಕಾರ ಕೂಡ ಕಳೆದ ಎರಡುವರೆ ವರ್ಷಗಳಿಂದ ಯೋಜನಾನುಷ್ಠಾನ ಕುರಿತು ಸಾಕಷ್ಟು ಸಭೆಗಳನ್ನು ನಡೆಸುತ್ತಲೇ ಇತ್ತು.‌

ತಾರ್ಕಿಕ ಅಂತ್ಯಕ್ಕೆ ಹೊಯ್ತು ಚರ್ಚೆ:

ಬೆಳಗಾವಿಯ ಚಳಿಗಾಲ ಅಧಿವೇಶನದ ಬಳಿಕ ಸರ್ಕಾರ ಕೂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.‌ಈ ಭಾಗದ ಜನಪ್ರತಿನಿಧಿಗಳು ಕೂಡ ಸದನದಲ್ಲಿ ಪಕ್ಷಾತೀತವಾಗಿ ವಿಷಯ ಪ್ರಸ್ತಾಪಿಸುತ್ತಲೆ ಬಂದು, ತಾರ್ಕೀಕ ಅಂತ್ಯಕ್ಕೆ ಕೊಂಡೋಯ್ದರು. ಪರಿಣಾಮವಾಗಿ ಸರ್ಕಾರ ಯುಕೆಪಿ ಹಂತ – 3 ರಲ್ಲಿ ಸ್ವಾಧೀನಕ್ಕೊಳಪಡುವ ಜಮೀನುಗಳ ಸ್ವಾಧೀನಕ್ಕೆ ಏಕರೂಪ ಪರಿಹಾರ ಧನ ಪ್ರಕಟಿಸಿದೆ.

ಸರ್ಕಾರ ಪ್ರಕಟಿಸಿರುವ ಪರಿಹಾರ ಧನ ವಿಷಯದಲ್ಲಿ ಯಾವುದೇ ಪ್ರತಿರೋಧ ಸದ್ಯಕ್ಕೆ ವ್ಯಕ್ತವಾಗಿಲ್ಲ. ಹಾಗಾಗಿ‌ ಬಹತೇಕ ಎಲ್ಲ ರೈತರು ಇದನ್ನು ಒಪ್ಪಿದಂತೆ ಆಗಿದೆ. ಅಷ್ಟೆ ಅಲ್ಲ ಸರ್ಕಾರದ ಕ್ರಮವನ್ನು ರೈತರು ಸಂಭ್ರಮಿಸುತ್ತಿದ್ದಾರೆ. ಪ್ರತಿಪಕ್ಷಗ ನಾಯಕರೂ ಸರ್ಕಾರದ ಕ್ರಮ ಸ್ವಾಗತಿಸಿ ಅನುಷ್ಠಾನಕ್ಕೆ ಆದ್ಯತೆ ನೀಡಲು ಒತ್ತಾಯಿಸಿದ್ದಾರೆ. ಸರ್ಕಾರ ಇನ್ನೆನಿದ್ದರೂ ಶೀಘ್ರ ಪ್ರಾಧಿಕಾರ ರಚಿಸಿ ಪರಿಹಾರ ಹಂಚಿಕೆಗೆ ಮುಂದಾಗಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಈ ಭಾಗದ ರೈತರ 5 ಲಕ್ಷ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡಲು ಅನುಕೂಲವಾಗಲಿದೆ.

ಕಾಂಗ್ರೆಸ್ಸಿಗೆ ಪೊಲಿಟಿಕಲ್ ಮೈಲೇಜ್:

ಹಂತ -3 ರ ಭೂಸ್ವಾಧೀನಕ್ಕಾಗಿ ಏಕರೂಪ ಬೆಲೆ ನಿಗದಿ ಕಾಂಗ್ರೆಸ್ ಪಾಲಿಗೆ ಒಂದು ಬಹುದೊಡ್ಡ ಪೊಲಿಟಿಕಲ್‌ ಮೈಲೇಜ್ ಆಗಲಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಉತ್ತರ ಕರ್ನಾಟದ ಪಾತ್ರ ನಿರ್ಣಾಯಕವಾಗಿದೆ. ಈ ಭಾಗದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೋ ಅದು ಅಧಿಕಾರ ಗದ್ದುಗೆ ಹಿಡಿಯುತ್ತ ಬಂದಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಾಲಿಗೆ ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಕೂಡ ಯುಕೆಪಿ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸಿತಾದರೂ ಅದು ಸಾಧ್ಯವಾಗಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಏಕರೂಪ ದರ ನಿಗದಿ ಪಡಿಸಲಾಯಿತಾದರೂ ಅದನ್ನು ರೈತರು ಒಪ್ಪಲ್ಲಿಲ್ಲ.

ಅಧಿಸೂಚನೆಗೆ ಒತ್ತಡ ಹಾಕಲಿ:

ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪೊಲಿಟಿಕಲ್ ಮೈಲೇಜ್ ಪಡೆಯಲು ಬಿಜೆಪಿಗೂ ಅವಕಾಶಗಳಿವೆ. ರಾಜ್ಯ ಸರ್ಕಾರ ನಿರ್ಧರಿಸಿರುವ ಏಕರೂಪ ಬೆಲೆ ನಿಗದಿ ಜತೆಗೆ ಯೋಜನಾನುಷ್ಠಾನಕ್ಕೆ ಕೃಷ್ಣಾ ನ್ಯಾಯಾಧೀಕರಣ -2 ರ ಅಧಿಸೂಚನೆ ಆಗಬೇಕಿದೆ. ಅದಕ್ಕೆ ಕೇಂದ್ರದ ಇಚ್ಛಾಶಕ್ತಿ ಮುಖ್ಯವಾಗಿದೆ.

ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಬಿಜೆಪಿಗರು ಕೇಂದ್ರದ ಮೇಲೆ ಇನ್ನಿಲ್ಲದ ಒತ್ತಡ ಹಾಕುವ ಕೆಲಸ ಮಾಡಬೇಕಿದೆ. ನ್ಯಾಯಾಧೀಕರಣ ವರದಿ ಸಲ್ಲಿಕೆ ಆಗಿ 15 ವರ್ಷ ಗತಿಸಿದೆ. ಅಧಿಸೂಚನೆ ಹೊರ ಬೀಳದ ಹೊರತು ಯೋಜನಾ ಕಾರ್ಯ ಅನುಷ್ಠಾನ ಅಸಾಧ್ಯವಾಗಲಿದೆ. ಯೋಜನೆ ಕಾರ್ಯಗತವಾಗುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವುದು ಬಹು ಮುಖ್ಯವಾಗಿದೆ. ಈ ಕಾರ್ಯದಲ್ಲಿ ರಾಜ್ಯದ ಬಿಜೆಪಿಗರು ಕೇಂದ್ರದ ಮನವೊಲಿಸುವಲ್ಲಿ ಯಶಸ್ವಿ ಆದಲ್ಲಿ ಅವರಿಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ‌ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top