ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಹಲವು ಏಳು ಬೀಳಗಳ ನಡುವೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತ್ರಿವಿಕ್ರಮ ಸಾಧನೆ ಮಾಡಿದ್ದಾರೆ. ಅಸಾಧ್ಯ ಎನ್ನುವ ಕೆಲಸಗಳನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಈಗಾಗಲೇ ಎರಡನ್ನು ಸಾಧಿಸಿರುವ ಅವರು ಮೂರನೆಯದ್ದನ್ನೂ ಇದೀಗ ಸಾಧಿಸಿದ್ದಾರೆ.
ಸಚಿವ ತಿಮ್ಮಾಪುರ ಅವರು ಸಚಿವರಾಗಿ ತ್ರಿವಿಕ್ರಮ ಸಾಧನೆಗೆ ಜಿಲ್ಲೆಯ ಶಾಸಕರ ಸಹಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮುಂತ್ರಿ ಡಿ.ಕೆ. ಶಿವಕುಮಾರ, ಸಕ್ಕರೆ ಸಚಿವ ಶಿವಾನಂದ ಪಾಟೀಲರು ಸಾಥ್ ನೀಡಿದ್ದೆ ಕಾರಣ. ಇವರೆಲ್ಲರ ಸಹಕಾರದಿಂದಾಗಿ ಬಂದಾಗಿದ್ದ ಜಿಲ್ಲೆಯ ಸಹಕಾರಿ ರಂಗದ ಏಕೈಕ ಸಕ್ಕರೆ ಕಾರ್ಖಾನೆ, ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾಭಗೊಂಡಿದೆ.
ಬದಲಾಯ್ತು ಭವಿಷ್ಯ:
ಬಂದಾಗಿದ್ದ ಈ ಕಾರ್ಖಾನೆ ಅಷ್ಟು ಸುಲಭವಾಗಿ ಆರಂಭಗೊಂಡಿದ್ದಲ್ಲ. ರೈತರು, ಕಾರ್ಖಾನೆ ಸಿಬ್ಬಂದಿಗಳ ಸತತ ಹೋರಾಟದ ಫಲ ಎನ್ನಬಹುದಾಗಿದ್ದರೂ ಸರ್ಕಾರದ ಮಟ್ಟದಲ್ಲಿ ತಿಮ್ಮಾಪುರ ಹಾಗೂ ಅವರ ಬೆಂಬಲಿಗರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಇದರಲ್ಲಿ ಮಂಕಾಗಿದ್ದ ಅವರ ರಾಜಕೀಯ ಭವಿಷ್ಯ ಕೂಡಾ ಬದಲಾಗಿಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. 2023 ರ ವಿಧಾನಸಭೆ ಚುನಾವಣೆಗೂ ಮುನ್ನ ಕಾರ್ಖಾನೆ ಆರಂಭಕ್ಕಾಗಿ ನಡೆದ ಹೋರಾಟದಲ್ಲಿ ರೈತರೊಂದಿಗೆ ಮುಂಚೂಣಿಯಲ್ಲಿ ನಿಂತ ತಿಮ್ಮಾಪುರ ಅವರಿಗೆ ಮುಧೋಳ ಕ್ಷೇತ್ರದಲ್ಲಿನ ಬದಲಾದ ರಾಜಕೀಯ ಸನ್ನಿವೇಶ ಕೂಡ ಅನುಕೂಲಕರವಾಗಿ ಪರಿಣಮಿಸಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರು ಗೆಲುವಿನ ದಾಖಲೆ ಬರೆಯಲು ಸಾಧ್ಯವಾಯಿತು.
ರಾಜ್ಯದಲ್ಲೂ ಸರ್ಕಾರ ಬದಲಾಗಿ, ತಿಮ್ಮಾಪುರ ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದರು. ಇದರಿಂದ ಕಾರ್ಖಾನೆ ಆರಂಭಕ್ಕೆ ಹೆಚ್ಚು ಅನುಕೂಲವಾಯಿತು. ಸರ್ಕಾರದಿಂದ ಅದನ್ನು ಲೀಜ್ ಗೆ ಖಾಸಗಿಯವರಿಗೆ ಕೊಡಿಸಿ, ಪುನಾರಂಭಗೊಳಿಸಿದ್ದರ ಹಿಂದೆ ಸಾಕಷ್ಟು ರಾಜಕಾರಣ ನಡೆಯಿತಾದರೂ ರೈತರು , ಕಾರ್ಖಾನೆ ಸಿಬ್ಬಂದಿ ಹಿತ ಕಾಪಾಡಿದರು ಎನ್ನುವುದು ಮೊದಲ ಸಾಧನೆಯ ಮೈಲುಗಲ್ಲಾಯಿತು.
ಸಂತ್ರಸ್ತರ ಹೋರಾಟಕ್ಕೆ ಸಾಥ್:
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ಸಂಪೂರ್ಣ ನನೆಗುದಿಗೆ ಬಿದ್ದಿತ್ತು. ಯೋಜನೆ ಹಂತ -3 ರ ವ್ಯಾಪ್ತಿಯ ರೈತರು ತಾವು ಕಳೆದುಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ಕಾಣದೇ ಕಂಗಾಲಾಗಿದ್ದರು. ಕೃಷ್ಣಾ ಮೇಲ್ದಂಡೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾಕಷ್ಟು ಹೋರಾಟ ನಡೆದರೂ ಸೂಕ್ತ ಪರಿಹಾರ ಕಾಣದೆ ಆಗಾಗ್ಗೆ ಹೋರಾಟ ನಡೆಸುತ್ತಲೇ ಇದ್ದರು. ಕೊನೆಗೆ ಅವರು ಯೋಜನಾನುಷ್ಠಾನ ಹಾಗೂ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿಗೆ ಮುಂದಾದರು.
ಆಗ ಮುಳುಗಡೆ ಸಂತ್ರಸ್ತರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಅಖಾಡಕ್ಕಿಳಿದ ಸಚಿವ ತಿಮ್ಮಾಪುರ ಸರ್ಕಾರ ಮತ್ತು ರೈತರ ಜತೆ ಹಲವು ಸುತ್ತಿನ ಮಾತುಕತೆಗಳು ನಡೆಯುವಂತೆ ನೋಡಿಕೊಂಡರು. ಸತತ ಸಭೆಗಳ ಬಳಿಕ ಸರ್ಕಾರ ಇದೀಗ ಯುಕೆಪಿ ಹಂತ-3 ರ ವ್ಯಾಪ್ತಿಯಲ್ಲಿ ಸ್ವಾಧೀನಕ್ಕೊಳಪಡುವ ಜಮೀನುಗಳಿಗೆ ಏಕರೂಪದ ನಿಗದಿ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ಐತಿಹಾಸಿಕ ನಿರ್ಧಾರ ಎಂದೇ ಬಣ್ಣಿಸಲಾಗುತ್ತಿದೆ.
ಏಕರೂಪ ಪರಿಹಾರ ಧನ:
ಯೋಜನಾನುಷ್ಠಾನಕ್ಕಾಗಿ ಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ ಪರಿಹಾರ ನಿಗದಿಗಾಗಿ ಸರ್ಕಾರ ಮತ್ತು ರೈತ ಮುಖಂಡರೊಂದಿಗೆ ಸಕಾಷ್ಟು ಸರ್ಕಸ್ ನಡೆಯಿತು. ರೈತರು ಪ್ರತಿ ಎಕರೆ ನೀರಾವರಿ ಭೂಮಿಗೆ 50 ಲಕ್ಷ ರೂ., ಒಣಬೇಸಾಯ ಭೂಮಿಗೆ 40 ಲಕ್ಷ ರೂ. ನಿಗದಿ ಪಡಿಸಬೇಕು ಪಟ್ಟು ಹಿಡಿದಿದ್ದರು. ರೈತರ ವಾದವನ್ನು ಜನಪ್ರತಿನಿಧಿಗಳೂ ಪುಷ್ಠಿಕರಿಸಿದ್ದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಸತತ ಮಾತುಕತೆ, ಮನವೊಲಿಕೆಯಿಂದಾಗಿ ಬುಧವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಏಕರೂಪ ಪರಿಹಾರ ದರ ನಿಗದಿ ಆಗಿದೆ. ಸರ್ಕಾರದ ನಿರ್ಧಾರಕ್ಕೆ ಅಲ್ಲಲ್ಲಿ ವಿರೋಧ ಕಂಡು ಬಂದರೂ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಇದಕ್ಕೆ ರೈತರೂ ಒಪ್ಪಬಹುದು ಎನ್ನುವ ವಾತಾವರಣವಿದೆ.
ಕಾಲಮಿತಿ ಪಾಲನೆ ಆಗಬೇಕು:
ಕೃಷ್ಣಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದು, ಅದರ ಯೋಜನಾ ವೆಚ್ಚದ ಗಾತ್ರ ಹೆಚ್ಚುತ್ತಲೇ ಇದೆ. ಇನ್ನೆನು ಈ ಯೋಜನೆ ಗಗನ ಕುಸುಮ ಎನ್ನುತ್ತಿರುವಾಗ ಸರ್ಕಾರ ಏಕರೂಪ ಪರಿಹಾರ ದರ ನಿಗದಿ ಮಾಡಿ, ಪರಿಹಾರ ನೀಡಿಕೆಗೆ ಮೂರು ಆರ್ಥಿಕ ವರ್ಷಗಳ ಕಾಲ ಮಿತಿ ನಿಗದಿ ಮಾಡಿದೆ. ಅಷ್ಟರಲ್ಲಿ ಅಂದುಕೊಂಡಂತೆ ಭೂಸ್ವಾಧೀನ ಪ್ರಕ್ರಿಯೆ ಕೊನೆಗೊಂಡಲ್ಲಿ ಮಾತ್ರ ಯೋಜನಾನುಷ್ಠಾನದ ಬಗೆಗೆ ಜನತೆಯಲ್ಲಿ ನಂಬಿಕೆ ಮೂಡಲು ಸಾಧ್ಯವಾಗಲಿದೆ.
ಇಷ್ಟೆಲ್ಲ ಪ್ರಯತ್ಮದ ಹಿಂದೆ ಸಚಿವ ತಿಮ್ಮಾಪುರ ಪಾತ್ರ ಅಪಾರವಾಗಿದೆ ಎನ್ನುವುದನ್ನು ಅವರ ಪಕ್ಷದವರೇ ಒಪ್ಪಿಕೊಂಡಿದ್ದು, ಇದು ಅವರ ಸಾಧನೆಯ ಎರಡನೇ ಅತಿ ದೊಡ್ಡ ಮೈಲುಗಲ್ಲು. ಇಡೀ ಜಿಲ್ಲೆಯ ಜನ ಏಕರೂಪ ದರ ನಿಗದಿ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ.
ಚಾಲುಕ್ಯ ಉತ್ಸವ ಪುನಾರಂಭ:
ಇವುಗಳ ಮಧ್ಯೆ ಸಚಿವ ತಿಮ್ಮಾಪುರ ಅವರ ಇನ್ನೊಂದು ಕಾರ್ಯ ಕೂಡ ಒಪ್ಪಲೇ ಬೇಕಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ ಚಾಲುಕ್ಯ ಉತ್ಸವ ಕಳೆದ ಏಳು ವರ್ಷಗಳಿಂದ ನಿಂತು ಹೋಗಿದೆ. ಮೊದ ಮೊದಲು ರಾಷ್ಟ್ರೀಯ ಉತ್ಸವವಾಗಿದ್ದ. ಚಾಲುಕ್ಯ ಉತ್ಸವ ಇಚ್ಚಾಶಕ್ತಿ ಕೊರತೆ ಪರಿಣಾಮ ಜಿಲ್ಲಾ ಉತ್ಸವವಾಗಿಯೂ ಆಚರಣೆ ನಿಂತು ಹೋಗಿದೆ. ಕಳೆದ ಮಾಚ್೯ ನಲ್ಲಿ ರನ್ನ ಉತ್ಸವದ ಜತೆಗೆ ನಡೆಯಬೇಕಿದ್ದ ಚಾಲುಕ್ಯ ಉತ್ಸವವನ್ನು
ನವೆಂಬರ್ ಮೊದಲ ವಾರದಲ್ಲಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕಳೆದ ಹೋಗಿದ್ದ ಈ ಉತ್ಸವ ಸಚಿವ ತಿಮ್ಮಾಪುರ ಪ್ರಯತ್ನದ ಫಲವಾಗಿ ಮತ್ತೆ ಶುರುವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ಘಾಟನೆಗೆ ಆಹ್ವಾನಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಏಳೆಂಟು ವರ್ಷಗಳಿಂದ ನಿಂತು ಹೋಗಿರುವ ಈ ಉತ್ಸವ ಪುನಾರಂಭಗೊಂಡು, ರಾಷ್ಟ್ರೀಯ ಉತ್ಸವವಾಗಿ ಮುಂದುವರೆಯಬೇಕಿದೆ. ಇದೂ ಕೂಡ ಸಚಿವ ತಿಮ್ಮಾಪುರ ಪ್ರಯತ್ನದ ಫಲವಾಗಿದೆ.
ಆಡಳಿತ ವ್ಯವಸ್ಥೆಯಲ್ಲಿ ಹತ್ತು ಹಲವು ಆರೋಪಗಳ ಮಧ್ಯೆ ಅವರ ಈ ಮೂರು ಕಾರ್ಯಗಳು ಶಾಶ್ವತವಾಗಿ ನಿಲ್ಲಲಿವೆ. ಹಾಗಾಗಿ ಅವರ ಈ ಮೂರು ಸಾಧನೆಗಳನ್ನು ತ್ರಿವಿಕ್ರಮ ಸಾಧನೆ ಎಂದು ಸಾರ್ವಜನಿಕ ವಲಯದಲ್ಲಿ ಬಣ್ಣಿಸಲಾಗುತ್ತಿದೆ.
- ವಿಠ್ಠಲ ಆರ್. ಬಲಕುಂದಿ




