ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519.60 ಮೀಟರಿನಿಂದ 524.256. ಮೀಟರಿಗೆ ಹೆಚ್ಚಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ನಡೆದಿರುವಾಗಲೇ ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ವಿವೀಸ್ ಅವರು ತಗಾದೆ ತೆಗೆದಿರುವ ಬಗೆಗೆ ರಾಜ್ಯ ಬಿಜೆಪಿ ಮುಖಂಡರು ಬಾಯಿ ಬಿಡದೆ ಮೌನ ವಹಿಸಿದ್ದಾರೆ.
ಕರ್ನಾಟಕ ಸರ್ಕಾರ ಯುಕೆಪಿ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಭೂಸ್ವಾಧೀನ, ಏಕರೂಪದ ಪರಿಹಾರ ಹಂಚಿಕೆ, ಪುನರ್ ವಸತಿ,ಪುನರ್ ನಿರ್ಮಾಣ ಕುರಿತಂತೆ ಗಂಭೀರ ಚಿಂತನೆ ನಡೆಸಿದೆ. ಯುಕೆಪಿ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ ಪರಿಹಾರ ನೀಡಲು ಸಾಕಷ್ಟು ಚರ್ಚೆಗಳನ್ನು ನಡೆಸಿದ್ದು, ಅಂತಿಮವಾಗಿ ಪರಿಹಾರ ಎಷ್ಟು ಎನ್ನುವುದನ್ನು ಘೋಷಿಸುವುದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.
ಭೂ ಸ್ವಾಧೀನಕ್ಕೊಳಪಡುವ ಜಮೀನುಗಳಿಗೆ ಎಷ್ಟು ಪರಿಹಾರ ನಿಗದಿ ಪಡಿಸಬೇಕು ಎನ್ನುವುದನ್ನು ಅಂತಿಮವಾಗಿ ಚರ್ಚಿಸಿ, ಪರಿಹಾರ ಧನ ಘೋಷಣೆಗಾಗಿಯೇ ಸರ್ಕಾರ ಸೆ.16 ರಂದು ವಿಶೇಷ ಸಚಿವ ಸಂಪುಟ ಸಭೆ ಆಯೋಜನೆ ಮಾಡಿದೆ.
ಫಡ್ನವೀಸ್ ತಗಾದೆ:
ಏತನ್ಮಧ್ಯೆ ಮಹಾ ಮುಖ್ಯಮಂತ್ರಿ ಫಡ್ನವೀಸ್ ಅವರು ಅಲಮಟ್ಟಿ ಅಣೆಕಟ್ಟು ಎತ್ತರಕ್ಕೆ ವಿರೋಧ ವ್ಯಕ್ತ ಪಡಿಸಿ, ಈ ಕುರಿತು ಸುಪ್ರೀಂ ಕೋಟ್೯ಗೆ ಹೋಗುವುದಾಗಿ ಹೇಳಿದ್ದಾರೆ. ಇನ್ನೆನು ಎಲ್ಲವೂ ಸರಿ ಆಗಲಿದೆ ಎನ್ನುವಾಗ ನೆರೆಯ ರಾಜ್ಯ ತಕರಾರು ತೆಗೆದಿದೆ. ಈ ಬಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪಢ್ನವೀಸ್ ಅವರ ಹೇಳಿಕೆಗೆ ತೀಕ್ಷ್ಣ ತೀರುಗೇಟು ನೀಡಿದ್ದಾರೆ.
ಸಿಹಿ ಸುದ್ದಿ ಬರಿ ಬೊಗಳೆ:
ಕರ್ನಾಟಕದಲ್ಲಿನ ಪ್ರತಿಪಕ್ಷದ ಬಿಜೆಪಿ ಮುಖಂಡರು ಮಾತ್ರ ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎನ್ನುವಂತೆ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ 2023 ಕ್ಕೂ ಮುನ್ನ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೊನೆ ಗಳಿಗೆಯಲ್ಲಿ ಕೃಷ್ಣಾ ನ್ಯಾಯಾಧೀಕರಣ -2 ರ ಅಧಿಸೂಚನೆ ಶೀಘ್ರ ಹೊರಬೀಳಲಿದೆ. ಚುನಾವಣೆಗೂ ಮುನ್ನ ಸಿಹಿ ಸುದ್ದಿ ಸಿಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರು ಹೇಳುತ್ತಲೇ ಬಂದರು. ಆದರೆ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಗಲೇ ಇಲ್ಲ.
ಎರಡು ವರ್ಷ ಬಳಿಕ ಎಚ್ಚರ:
2023 ರ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಕಾಲ ಯುಕೆಪಿ ಯತ್ತ ಹೊರಳಿ ನೋಡಲಿಲ್ಲವಾದರೂ ಕಳೆದ ಆರು ತಿಂಗಳಿನಿಂದ ಯೋಜನಾನುಷ್ಠಾನದ ಕುರಿತು ತೀವ್ರ ಗಮನ ಹರಿಸಿದ್ದಾರೆ.
ಸರ್ಕಾರದ ಈ ಪ್ರಯತ್ನಕ್ಕೆ ಸಾಥ್ ನೀಡಬೇಕಾದ ಪ್ರತಿಪಕ್ಷಗಳ ಮುಖಂಡರು ಸುಮ್ಮನೆ ಇವೆ.
ಮಹಾರಾಷ್ಟ್ರ ಮುಖ್ಯಮಂತ್ರಿಗಳು ಇಲ್ಲಿನ ಪ್ರಯತ್ನಗಳ ಬೆನ್ನಲ್ಲೆ ಅಣೆಕಟ್ಟು ಎತ್ತರಕ್ಕೆ ತಕರಾರು ತೆಗೆದಿದ್ದಾರೆ. ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿವೆ. ಕನಿಷ್ಠ ಪಕ್ಷ ನಮ್ಮ ರಾಜ್ಯದ ಯೋಜನೆಗೆ ಅಡ್ಡಿ ಪಡಿಸಬೇಡಿ ಎನ್ನುವ ಮಾತನ್ನು ಹೇಳುವ ಗೋಜಿಗೆ ಹೋಗಿಲ್ಲ.
ಪ್ರಧಾನಿ ಭೇಟಿ ದೂರದ ಮಾತು:
ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಗಳ ಕೇಂದ್ರ ಸಚಿವರು, ಸಂಸದರು ರಾಜ್ಯದ ಹಿತಾಸಕ್ತಿ ಕಾಪಾಡುವತ್ತ ಲಕ್ಷ್ಯ ವಹಿಸದೇ ಇರುವುದು ದುರಾದೃಷ್ಟಕರ ಸಂಗತಿ. ಕೃಷ್ಣಾ ನ್ಯಾಯಾಧೀಕರಣ -2 ಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿ ಎಂದು ಒತ್ತಾಯಿಸುವ ಗೋಜಿಗೂ ಹೋಗಿಲ್ಲ. ಇನ್ನು ಪ್ರಧಾನಿಗಳ ಭೇಟಿ ದೂರದ ಮಾತೆ ಸರಿ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರ ಮೇಲೆ ನಿರಂತರ ಒತ್ತಡ ಹಾಕುತ್ತ ಬಂದಿದ್ದರು. ಸಂಸದರಾದ ಬಳಿಕ ಅವರೂ ಮೌನವಾಗಿದ್ದಾರೆ.
ಕೇಂದ್ರಕ್ಕೆ ಪತ್ರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಣೆಕಟ್ಟು ಎತ್ತರ ಹೆಚ್ಚಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಲ್ಲದೆ ಪ್ರಧಾನಿ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ರಾಜ್ಯದಲ್ಲಿನ ಪ್ರತಿಪಕ್ಷಗಳು ಅಧಿಕಾರದಲ್ಲಿವೆ. ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ವಿಷಯದಲ್ಲಿ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಸಾಥ್ ನೀಡುವ ಕೆಲಸ ಮಾಡಬೇಕಿದೆ.
ಎಲ್ಲರೂ ಸೇರಿ ಕೇಂದ್ರದ ಮನವೊಲಿಸಿ ಅಧಿಸೂಚನೆ ಹೊರಡಿಸುವಂತೆ ಮಾಡಿದಾಗ ಮಾತ್ರ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗಲಿದೆ. ಲಕ್ಷಾಂತರ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳ ಪಡಲಿದೆ. ಇಲ್ಲದೆ
ಹೋದಲ್ಲಿ ಬರಿ ಕಾಲಹರಣವಾಗಲಿದೆ.
- ವಿಠ್ಠಲ ಆರ್. ಬಲಕುಂದಿ




