ಶುಗರ್ಸ್; ಲೋಕಾ ದೂರಿನ‌ ಹಿಂದೆ ಕಾಣದ ಕೈಗಳ ಷಡ್ಯಂತ್ರ..?

ಮುಧೋಳದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮರು ಟೆಂಡರ್ ನಲ್ಲಿ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಈ ವಿಷಯದಲ್ಲಿ ಭಾರಿ‌ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರು ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಬೆನ್ನಲ್ಲೆ ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ.

ಸಿದ್ದಾರೂಢ ಕಂಬಳಿ ಅವರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಯಲಿ ಎನ್ನುವ ಬದಲಿಗೆ ಸಹಕಾರಿ ರಂಗದಲ್ಲಿರುವ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸುವ ಹುನ್ನಾರ ಕಾಣದ ಪ್ರಭಾವಿಗಳ ಕೈ ಚಳಕ ದೂರಿನ‌ ಹಿಂದೆ ಎನ್ನುವ ಸಂಶಯವನ್ನು ಕೆಲವರು ವ್ಯಕ್ತ ಪಡಿಸಿದ್ದಾರೆ. ಅದು ನಿಜವಿರಬಹುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ.‌ ತಿಮ್ಮಾಪುರ ಕಾರ್ಖಾನೆ ಬೆಳೆಯಬಾರದು, ಕಾರ್ಖಾನೆ ಹೆಸರು ಕೆಡಿಸಬೇಕು, ಅದು‌ ಮುಚ್ಚಬೇಕು ಎನ್ನುವ ಷಡ್ಯಂತ್ರ ಕೆಲವರದ್ದಿರಬಹುದು ಎಂದು‌ ಹೇಳುವ ಮೂಲಕ ಸಂಶಯದ ಮಾತನ್ನು ಪುಷ್ಠಿಕರಿಸಿದ್ದಾರೆ.

ಸಂಶಯದ ಹಿಂದಿನ‌ ಕಾರಣ:

ಕಾರ್ಖಾನೆ ಮುಚ್ಚಿಸಲು ಕೆಲ ಪ್ರಭಾವಿಗಳು ದೂರಿನ ಹಿಂದೆ ಇದ್ದಾರೆ ಎನ್ನುವ ಸಂಶಯಕ್ಕೆ ಕಾರಣ ನೀಡಿರುವ ಕಾರ್ಖಾನೆ ಹಿಂದಿನ‌ ನಿರ್ದೇಶಕ ದಯಾನಂದ ಪಾಟೀಲ ಅವರು, ಪ್ರಸಕ್ತ ಸಾಲಿನ‌ ಕಬ್ಬು ಹಂಗಾಮು ಆರಂಭಗೊಳ್ಳುವ ಹೊತ್ತಲ್ಲಿ ಮಾಹಿತಿ ಕೊರತೆಯಿಂದ ಸುಳ್ಳು ದೂರು ದಾಖಲಾಗಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಜತೆಗೆ ಕಾರ್ಖಾನೆ ಹೆಸರು ಕೆಡಿಸುವ ದುರುದ್ದೇಶವೂ ಅಡಗಿರಬಹುದು ಎಂದು ಹೇಳಿದ್ದಾರೆ.

ಸದಾ ವಿವಾದದಲ್ಲೆ ಇರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಹಾನಿಯ ಮಧ್ಯೆಯೂ ಜಿಲ್ಲೆಯ ಇತರೆ ಖಾಸಗಿ ಸಕ್ಕರೆ ಕಾರ್ಖಾನೆಗಳಿಗಿಂತ ಕಬ್ಬಿಗೆ ಹೆಚ್ಚಿನ‌ ದರ ನೀಡಿದ ಉದಾಹರಣೆಗಳು ಇವೆ. ಇದನ್ನು ಪ್ರಶ್ನಿಸಿಯೇ ಇತರೆ ಖಾಸಗಿ ಕಾರ್ಖಾನೆಗಳ ವಿರುದ್ಧ ರೈತರು ಹೋರಾಟ ನಡೆಸಿದ ಪ್ರಸಂಗಗಳೂ ಉಂಟು.

ರಾಜಕಾರಣ ಉಲ್ಟಪಲ್ಟಾ:

ಎಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಕಾರ್ಖಾನೆ ತೀವ್ರ ನಷ್ಟದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಬಂದಾಗಿದ್ದ ವೇಳೆ ರೈತರು , ಕಾರ್ಖಾನೆ ಸಿಬ್ಬಂದಿ‌ ಕಾರ್ಖಾನೆ ಆರಂಭಕ್ಕಾಗಿ ಬೀದಿಗಿಳಿದು ಉಗ್ರ ಹೋರಾಟಕ್ಕಿಳಿದಾಗ ಮುಧೋಳ ರಾಜಕಾರಣವೇ ಉಲ್ಟಪಲ್ಟಾ ಆಗಿದ್ದು ಕಣ್ಮುಂದೆ ಇದೆ.

ಸತತ ಹೋರಾಟದ ಫಲವಾಗಿ ಬಂದಾಗಿದ್ದ ಕಾರ್ಖಾನೆ ಆರಂಭವಾಯಿತಲ್ಲ ಎನ್ನುವ ಖುಷಿಯಲ್ಲಿ ಜನತೆಯಲ್ಲಿ ಇದ್ದಾಗಲೇ ಟೆಂಡರ್ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರು ಲೋಕಾಯುಕ್ತದಲ್ಲಿ ದಾಖಲಾಗಿದೆ.

ಲೋಕಾಯುಕ್ತದಲ್ಲಿ ದೂರು ದಾಖಲಾಗಲು ಕಾಣದ ಕೈಗಳು ಕಾರಣವಿರಬಹುದು ಎನ್ನುವ ಸಂಶಯವೂ ವ್ಯಾಪಕವಾಗಿದೆ. ಲೋಕಾಯುಕ್ತದಲ್ಲಿ ದೂರುಂತೂ ದಾಖಲೆ ಆಗಿದೆ. ದೂರಿನ ಹಿನ್ನೆಲೆಯಲ್ಲಿ ಲೋಕಾದ ಮುಂದಿನ ಕ್ರಮಗಳು ಏನು ಎನ್ನುವುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ.

ಕಾರ್ಖಾನೆಗೆ ಧಕ್ಕೆ ಆಗಬಾರದು:

ಏನೇ ಆದರೂ ಸಹಕಾರಿ ಕ್ಷೇತ್ರದಲ್ಲಿನ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಆಗದ ಹಾಗೆ ಸರ್ಕಾರ ನೋಡಿಕೊಳ್ಳಬೇಕಿದೆ. ಬಂದಾಗಿದ್ದ ಕಾರ್ಖಾನೆ ಆರಂಭವಾಗಿದ್ದೆ ಒಂದು ಪವಾಡ ಎನ್ನುವಂತಾಗಿದೆ. ಅಂತಹದ್ದರಲ್ಲಿ ರಾಜಕೀಯ‌ ಮೇಲಾಟಗಳು ಏನೆ ಆಗಿದ್ದರೂ ಯಾವುದೇ ತೊಂದರೆ ಆಗದೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಕಬ್ಬು‌ ನುರಿಸುವ ಕೆಲಸಕ್ಕೆ ಅಡ್ಡಿ ಆಗಬಾರದು ಎನ್ನುವುದು ರೈತರ ಸ್ಪಷ್ಟ ನಿಲುವಾಗಿದೆ.

ಎಲ್ಲವೂ ಕಾನೂನು ಬದ್ಧ:

ಲೋಕಾಗೆ ಸಲ್ಲಿಸಿರುವ ದೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಮತ್ತು ಮಾಜಿ‌ ಸಚಿವ ಎಸ್. ಆರ್. ‌ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ‌ ಮಾಡಲಾಗಿದೆ. ಇವರ ಪೈಕಿ‌ ಉಸ್ತುವಾರಿ ಸಚಿವ ತಿಮ್ಮಾಪುರ ಅವರು ಮಾಧ್ಯಮಗಳಿಗೆ ಈ ಕುರಿತು‌ ಪ್ರತಿಕ್ರಿಯಿಸಿ, ಎಲ್ಲವೂ ಕಾನೂನು ಬದ್ದವಾಗಿ ನಡೆದಿದೆ.‌ ಸಂಪುಟದಲ್ಲಿ ಸಾಕಷ್ಟು‌ ಚರ್ಚಿಸಿ‌ ಲೀಜ್ ಗೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟರ‌ ಮಧ್ಯೆ ಲೋಕಾಯುಕ್ತರ ಮುಂದಿನ ನಡೆ ಬಗೆಗೆ ಎಲ್ಲರಲ್ಲೂ ಕುತೂಹಲವಂತೂ ಹುಟ್ಟಿಕೊಂಡಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top