ಬಾಗಲಕೋಟೆ: ಜಿಲ್ಲೆಯ ಸಹಕಾರಿ ರಂಗದಲ್ಲಿನ ಏಕೈಕ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನ ಹಿಂದೆ ಕಾಣದ ಕೈಗಳ ಪ್ರಭಾವ ಇರಬಹುದು ಎಂದು ಕಾರ್ಖಾನೆ ಮಾಜಿ ನಿರ್ದೇಶಕ ದಯಾನಂದ ಪಾಟೀಲ ಸಂಶಯ ವ್ಯಕ್ತ ಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಖಾನೆ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಸಲಾಗಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ. ಕಾರ್ಖಾನೆ ಕಬ್ಬು ನುರಿಸುವಿಕೆ ಆರಂಭಿಸುವ ಹೊತ್ತಲ್ಲೆ, ದೂರು ಸಲ್ಲಿಕೆ ಆಗಿರುವುದು ಸಾಕಷ್ಟು ಸಂಶಯ ಹುಟ್ಟಿಗೆ ಕಾರಣವಾಗಿದೆ. ಸಹಕಾರಿ ರಂಗದ ಕಾರ್ಖಾನೆ ಬೆಳೆಯಬಾರದು ಎನ್ನುವ ದುರುದ್ದೇಶವೂ ಇದರ ಹಿಂದೆ ಅಡಗಿರಬಹುದು. ಸಕ್ಕರೆ ಕಾರ್ಖಾನೆ ಮುಚ್ಚಿ ಹಾಕಿಸಲು ನಡೆದಿರುವ ರಾಜಕೀಯ ಷಡ್ಯಂತ್ರ ಇದಾಗಿರಬಹುದು. ಇಂತಹ ಹುನ್ನಾರವನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಜೋಕಾನಟ್ಟಿ ಗ್ರಾಮದ ಸಿದ್ದಾರೂಢ ಕಂಬಳಿ ಎಂಬುವರು ದೂರು ನೀಡಿದ್ದು, ಆ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಲೋಕಾಯುಕ್ತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಲೀಜ್ ಪಡೆದಿರುವ ಮಾಜಿ ಸಚಿವರು ಹಾಗೂ ಬೀಳಗಿ ಶುಗರ್ಸ್ ಮಾಲೀಕರಾದ ಎಸ್.ಆರ್.ಪಾಟೀಲ್, ಅಬಕಾರಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಪುರ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಲೋಕಾಯುಕ್ತದಲ್ಲಿ ಸಲ್ಲಿಸಿರುವ ದೂರು ಅಸತ್ಯದಿಂದ ಕೂಡಿದೆ ಎಂದರು.
ರೈತ ಬಾಂಧವರು ಶೇರುದಾರರು ಇಂತಹ ವದಂತಿಗಳಿಗೆ ಕಿವಿಗೊಡಬಾರದು , ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆಯನ್ನು ಉಳಿಸಬೇಕು ಎಂದು ಅವರು ಮನವಿ ಮಾಡಿದರು.
ಬೀಳಗಿ ಶುಗರ್ಸ ನಿರ್ದೇಶಕ ಹೆಚ್.ಎಲ್.ಪಾಟೀಲ ಮಾತನಾಡಿ, ಕಾರ್ಖಾನೆ ಲೀಜಿಗೆ ಪಡೆಯುವ ವಿಷಯದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ.ಕಾರ್ಖಾನೆ ಹೆಸರು ಹಾಳು ಮಾಡಿ, ರೈತರು ಇಲ್ಲಿಗೆ ಕಬ್ಬು ಕಳುಹಿಸಬಾರದು ಎನ್ನುವ ದುರುದ್ದೇಶದಿಂದ ದೂರು ದಾಖಲಿಸಲಾಗಿದ್ದು, ದೂರುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಶೇರುದಾರ ವಿಠ್ಠಲ ತುಮ್ಮರಮಟ್ಟಿ, ಕಾರ್ಖಾನೆಯ ಮಾಜಿ ನಿರ್ದೇಶಕ ರಾಜುಗೌಡ ಪಾಟೀಲ್,, ಸಹಕಾರಿ ಸಕ್ಕರೆ ಕಾರ್ಖಾನೆಯ ಯೂನಿಯನ ಅಧ್ಯಕ್ಷ ಉಮೇಶ ಬಡಿಗೇರ್, ಕಾರ್ಯದರ್ಶಿ ಪ್ರಕಾಶ ಕಬ್ಬೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.




