ಬಾಗಲಕೋಟೆ: ಬಸವತತ್ವ ಕಾಯಕ ವರ್ಗಗಳ ಅಸ್ಮಿತೆ ಆಗಿದ್ದು, ಶ್ರೇಣಿಕೃತ ವ್ಯವಸ್ಥೆ ಹೋಗಲಾಡಿಸಿ, ಇನ್ನಷ್ಟು ಸಮರ್ಥವಾಗಿ ಸಮ ಸಮಾಜ ನಿರ್ಮಾಣದ ಉದ್ದೇಶದಿಂದ ಸೆ. 10 ರಂದು ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮೀಜಿ ಹೇಳಿದರು.
ಇಲ್ಲಿನ ನವನಗರದಲ್ಲಿನ ಭೋವಿ ಪೀಠದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಣ್ಣನವರನ್ನು ಒಪ್ಪಿಕೊಂಡವರು ಸೇರಿದಂತೆ ನಾಡಿನ ನಾನಾ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ. ಇದು ಜಾತಿ ಸಮಾವೇಶವಲ್ಲ, ಬಸವತತ್ವ ಸಮಾವೇಶ, ಜಾತ್ಯತೀತ ಸಮಾವೇಶ ಎಂದು ಅವರು ಹೇಳಿದರು.
ಚರಂತಿಮಠ ಪ್ರಭು ಸ್ವಾಮೀಜಿ, ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗುರುಸಿದ್ದೇಶ್ವ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿ, ಎಲ್ಲರೂ ಒಟ್ಟಾಗಿ ಬಾಳುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಈಗ ರಾಜ್ಯದಲ್ಲಿ ಶರಣ ಸಂಸ್ಕೃತಿ ಅಭಿಯಾನ ಆರಂಭಿಸಲಾಗಿದೆ. ಅದರ ಅಂಗವಾಗಿ ಬಾಗಲಕೋಟೆ ನವನಗರದ ಕಲಾಭವನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸೆ.೧೦ ರಂದು ಸಂಜೆ ೬ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಗದಗ-ಡಂಬಳದ ಎಡೆಯೂರ ತೋಟಂದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೆಹಳ್ಳಿ ತರಳುಬಾಳು ಶಾಖಾಮಠದ ಪಂಡಿತಾರಾರ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಇಳಕಲ್-ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಶಿವಯೋಗಿಗಳು ಅಧ್ಯಕ್ಷತೆ ವಹಿಸುವರು. ಬೇಲೂರು ಗುರುಬಸವೇಶ್ವರ ಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಡಾ.ಪ್ರಶಾಂತ ನಾಯಕ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಣೆಹಳ್ಳಿ ಶಿವಸಂಚಾರ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಕಡಪಟ್ಟಿ, ಬಸವರಾಜ ಅನಗವಾಡಿ, ಲುಕ್, ಜಿ.ಎಂ.ಸಿಂಧೂರ, ಮುತ್ತು ಜೋಳದ, ಬರಗುಂಡಿ ಇತರರು ಇದ್ದರು.




