ಬಾಗಲಕೋಟೆ: ಮೊನ್ನೆ ತಾನೇ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಮಾತಿಗೆ ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತ ಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇಂದು ” ಸಚಿವ ತಿಮ್ಮಾಪುರ ಬಿಡಿ, ಸರ್ಕಾರದಲ್ಲಿದ್ದು ಅವರು ರೈತರ ಪರವಾಗಿ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆಲಮಟ್ಟಿಯಲ್ಲಿ ಕೃಷ್ಣೆಯ ಜಲದಿಗೆ ಬಾಗಿನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ವೇಳೆ ಸಚಿವ ತಿಮ್ಮಾಪುರ ಅವರನ್ನು ಉದ್ದೇಶಿಸಿ ” ತಿಮ್ಮಾಪುರ ಅವರನ್ನು ಬಿಡಿ, ಅವರು ಸರ್ಕಾರದಲ್ಲಿದ್ದು ರೈತರ ಪರವಾಗಿಯೇ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಆದದ್ದು ಇಷ್ಟೆ :
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -೩ ರ ವ್ಯಾಪ್ತಿಯಲ್ಲಿ ಮುಳುಗಡೆ ಆಗಲಿರುವ ಜಮೀನುಗಳಿಗೆ ಒಪ್ಪಿತ (ಕನ್ಸಂಟ್ ಅವಾರ್ಡ) ದರ ನಿಗದಿ ಕುರಿತು ಸೆ.೩ ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಸಚಿವರು, ಶಾಸಕರು ಹಾಗೂ ರೈತ ಮುಖಂಡರ ಸಭೆ ಆಯೋಜನೆಗೊಂಡಿತ್ತು. ಆ ಸಭೆಯಲ್ಲಿ ಭಾಗವಹಿಸಿದವರು ಒಪ್ಪಿತ ದರ ನಿಗದಿ ಕುರಿತಂತೆ ತಮ್ಮ ತಮ್ಮ ಅಭಿಪ್ರಾಯ ಮಂಡನೆ ವೇಳೆ, ಸಚಿವ ತಿಮ್ಮಾಪುರ ಅವರು ಮಾತನಾಡುವ ವೇಳೆ ಪ್ರತಿ ಎಕರೆ ನೀರಾವರಿಗೆ 50 ಲಕ್ಷ ರೂ., ಒಣ ಬೇಸಾಯ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂ.ನಿಗದಿ ಪಡಿಸುವಂತೆ ಹೇಳಿದಾಗ ಗರಂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ” ಸರ್ಕಾರದ ಭಾಗವಾಗಿ ನೀವು ಹೀಗೆ ಮಾತನಾಡಬಾರದು” ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು. ಆಗ ಸಚಿವ ತಿಮ್ಮಾಪುರ “ರೈತರ ಅಭಿಪ್ರಾಯ ಹೇಳಿದ್ದೇನೆ. ನಿಮಗೆ ಸರಿ ಅನ್ನಿಸುವ ದರ ನಿಗದಿ ಮಾಡಿ” ಎಂದು ಹೇಳಿ ಸುಮ್ಮನಾಗಿದ್ದರು.
ಸರ್ಕಾರದಲ್ಲಿದ್ದು ರೈತರ ಪರ :
ಸಚಿವ ತಿಮ್ಮಾಪುರ ಅವರ ಮಾತಿಗೆ ವ್ಯಾಪಕ ಬೆಂಬಲ ಕೂಡಾ ರೈತ ಸಮೂಹದಿಂದ ವ್ಯಕ್ತವಾಗಿದೆ. ಅಲ್ಲಿಗೆ
ಎಲ್ಲವೂ ಮುಗಿದಿತ್ತು.
ಆದರೆ ಉಪ ಮುಖ್ಯಮಂತ್ರಿಗಳು ಆ ವಿಷಯವನ್ನು ಶನಿವಾರ ಆಲಮಟ್ಟಿಯಲ್ಲಿ ಮತ್ತೆ ಪ್ರಸ್ತಾಪಿಸಿದ್ದು ನೋಡಿದರೆ ಮೊನ್ನೆಯ ಸಭೆಯಲ್ಲಿ ತಿಮ್ಮಾಪುರ ಅವರು ರೈತರ ಪರ ಮಾತನಾಡಿದ್ದೇ ತಪ್ಪಾಯ್ತೆನೋ ಎನ್ನುವ ಭಾವನೆ ಹುಟ್ಟುವಂತೆ ಮಾಡಿದೆ.
ಉಪ ಮುಖ್ಯಮಂತ್ರಿಗಳ ಮಾತು ಅಲ್ಲಿಗೆ ಸೀಮಿತವಾಗಿದ್ದಲ್ಲಿ ಎಲ್ಲವೂ ಮುಗಿದು ಹೋಗುತ್ತಿತ್ತು. ಆದರೆ ಹಾಗೆ ಆಗಿಲ್ಲ. ಸಚಿವ ತಿಮ್ಮಾಪುರ ಅವರು ಸರ್ಕಾರದ ಭಾಗವಾಗಿ, ರೈತರ ಪರ ಆಡಿರುವ ಮಾತನ್ನೂ ಇನ್ನೂ ಡಿಸಿಎಂ ಅವರು ಮರೆತಂತೆ ಕಾಣಿಸುತ್ತಿಲ್ಲ.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ನಡೆದ ಮೊನ್ನಿನ ಸಭೆಯಲ್ಲಿ, ಇಂದು ಆಲಮಟ್ಟಿಯಲ್ಲಿ ನಡೆದ ಬಾಗಿನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳು ಆಡಿರುವ ಮಾತುಗಳನ್ನು ಗಮನಿಸಿದ ಯಾರಿಗೆ ಆಗಲಿ ಏಲ್ಲೋ ಒಂದು ಕಡೆ ಸಚಿವ ತಿಮ್ಮಾಪುರ ಅವರು ಒಪ್ಪಿತ ದರ ನಿಗದಿ ವಿಷಯದಲ್ಲಿ ಸರ್ಕಾರದಲ್ಲಿದ್ದು ರೈತರ ಪರವಾಗಿ ಬ್ಯಾಟಿಂಗ್ ಮಾಡಿದ್ದು ಅಸಮಾಧಾನ ಹುಟ್ಟಿಸಿದಂತೆ ಕಾಣಿಸುತ್ತಿದೆ.
ಗಟ್ಟಿಯಾಗಿ ನಿಲ್ಲಲಿ:
ಏನೆ ಆಗಲಿ, ಸಚಿವ ತಿಮ್ಮಾಪುರ ಅವರು ರೈತರ ಪರವಾಗಿ ಇನ್ನಷ್ಟು ಗಟ್ಟಿಯಾಗಿ ನಿಂತು ಮುಳುಗಡೆ ಆಗಲಿರುವ ಜಮೀನುಗಳಿಗೆ ಉತ್ತಮ ಬೆಲೆ ಕೊಡಿಸುವ ಕೆಲಸ ಮಾಡಲಿ, ಮುಖ್ಯಮಂತ್ರಿಗಳು ಕೂಡ ಅವರ ವಾದ ಬೆಂಬಲಿಸಲಿ ಎನ್ನುವುದು ಬಹುತೇಕ ರೈತರ ಆಶಯವಾಗಿದೆ. ಈಗಾಗಲೇ ಅನೇಕ ಜನ ರೈತರು ತಿಮ್ಮಾಪುರ ಅವರು ರೈತರ ಪರವಾಗಿ ನಿಂತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಮೆಚ್ಚುಗೆ ವ್ಯಕ್ತವಾಗಿರುವುದು ಗಮನಾರ್ಹ.
- ವಿಠ್ಠಲ ಆರ್. ಬಲಕುಂದಿ




