ಆಲಮಟ್ಟಿಯಲ್ಲಿ ಶನಿವಾರ ಕೃಷ್ಣೆಗೆ ಮುಖ್ಯಮಂತ್ರಿಗಳು ಬಾರಿ ಬಾಗೀನ ಸಲ್ಲಿಸಲಿದ್ದಾರೆ. ಈ ಬಾರಿಯ ಬಾಗೀನ ಪ್ರತಿವರ್ಷದಂತಲ್ಲ. ಇದೊಂದು ಐತಿಹಾಸಿ ಬಾಗೀನ ಕಾರ್ಯಕ್ರಮ ಆಗಲಿದೆ ಎನ್ನುವ ಕಾತರ, ಕುತೂಹಲ ರೈತ ಸಮೂಹದಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನ ನಡೆಸಿದ್ದು, ಆ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಿದೆ. ಮೊನ್ನೆ ತಾನೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕೆಬಿಜೆಎನ್ ಎಲ್ ವ್ಯಾಪ್ತಿಯ ಸಚಿವರು, ಶಾಸಕರು ಹಾಗೂ ರೈತ ಮುಖಂಡರ ಸಭೆ ನಡೆಸಿ ಯುಕೆಪಿ ಹಂತ-3 ರಲ್ಲಿ ಮುಳುಗಡರ ಆಗಲಿರುವ ಭೂಮಿಗಳ ಸ್ವಾಧೀನಕ್ಕಾಗಿ ಒಪ್ಪಿತ (ಕನ್ಸೆಂಟ್ ಅವಾರ್ಡ) ದರ ನಿಗದಿ ಕುರಿತು ಚರ್ಚಿಸಲು ಸಭೆ ಆಯೋಜನೆ ಮಾಡಿದ್ದರು.
ಸಭೆಯಲ್ಲಿ ಪ್ರತಿ ಎಕರೆ ನೀರಾವರಿ, ಪ್ರತಿ ಎಕರೆ ಒಣ ಬೇಸಾಯಕ್ಕೆ ಇಂತಿಷ್ಟು ದರ ನಿಗದಿ ಮಾಡಿ, ಜತೆಗೆ ಹೆಚ್ಚುವರಿ ದರ ಕೂಡ ನಿಗದಿಗೆ ಸಲಹೆ ಸೂಚನೆಗಳನ್ನು ಮುಖಂಡರು ನೀಡಿದ್ದರು.
ಸಭೆಯಲ್ಲಿ ಎಲ್ಲರ ಸಲಹೆಗಳನ್ನು ಆಲಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹಣಕಾಸು ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಸಂಪುಟದಲ್ಲೂ ವಿಷಯ ಪ್ರಸ್ತಾಪಿಸಿ, ಸೂಕ್ತ ದರ ನಿಗದಿಸಲಾಗುವುದು ಎಂದು ತಿಳಿಸಿದ್ದರು. ಅಷ್ಟೆ ಅಲ್ಲದೆ ಸಚಿವರು, ಶಾಸಕರಿಗೆ ಬೆಂಗಳೂರಿನಲ್ಲೆ ಇರಲು ಸೂಚಿಸಿದ್ದರು. ಸಚಿವರ ಈ ನಡೆಯಿಂದ ರೈತ ಸಮೂಹದಲ್ಲಿ ಹೊಸ ಆಶಾಭಾವನೆ ಹುಟ್ಟಿಕೊಂಡಿತ್ತು.
ಗುರುವಾರದ ಸಂಪುಟದಲ್ಲಿ ಒಪ್ಪಿತ ದರ ಎಷ್ಟಾಗಿರಲಿದೆ ಎನ್ನುವುದು ನಿರ್ಧಾರವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಸಂಪುಟ ಸಭೆ ಬಗೆಗೆ ತೀವ್ರ ಕುತೂಹಲ ಹೊಂದಿದ್ದರು. ಆದರೆ ಸಂಪುಟ ಸಭೆ ಬಳಿಕ ಭೂಸ್ವಾಧೀನದ ಒಪ್ಪಿತ ದರದ ಬಗೆಗೆ ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ಏನನ್ನೂ ಹೇಳಲಿಲ್ಲ. ಇದು ಒಂದು ಹಂತದಲ್ಲಿ ರೈತರಲ್ಲಿ ನಿರಾಸೆ ಭಾವಕ್ಕೆ ದೂಡಿದ್ದು ನಿಜ.
ಸಂಪುಟ ಸಭೆಯಲ್ಲಿ ಒಪ್ಪಿತ ದರ ನಿಗದಿ ಬಗೆಗೆ ಚರ್ಚೆ ಆಗಿರಬಹುದು, ಮುಖ್ಯಮಂತ್ರಿಗಳು ಈ ವಿಷಯವನ್ನು ಆಲಮಟ್ಟಿಯಲ್ಲಿ ಸೆ.6 ರಂದು ನಡೆಯಲಿರುವ ಕೃಷ್ಣೆಗೆ ಬಾಗಿನ ಸಲ್ಲಿಸಲು ಆಗಮಿಸಿದ ವೇಳೆ ಘೋಷಣೆ ಮಾಡಬಹುದು ಎನ್ನುವ ಅದಮ್ಯ ವಿಶ್ವಾಸದಲ್ಲಿ ಇದ್ದಾರೆ. ಬಾಗಿನ ಕಾರ್ಯಕ್ರಮದಲ್ಲಾದರೂ ರೈತರ ಆಶಯ ಇಡೇರಬಹುದೊ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
ಒಂದೊಮ್ಮೆ ಮುಖ್ಯಮಂತ್ರಿಗಳು ಆಲಮಟ್ಟಿಯ ಕಾರ್ಯಕ್ರಮದಲ್ಲಿ ರೈತರ ಭೂ ಸ್ವಾಧೀನಕ್ಕೆ ಒಪ್ಪಿತ ದರ ಘೋಷಣಸ ಮಾಡಿದಲ್ಲಿ ಅದೊಂದು ಐತಿಹಾಸಿಕ ನಿರ್ಧಾರವಾಗಲಿದೆ. ರೈತರಿಗೂ ಒಪ್ಪಿಗೆ ಆಗುವ ರೀತಿಯಲ್ಲಿ ದರ ಘೋಷಣೆ ಆಗಲಿ ಎನ್ನುವುದು ಬಹುತೇಕರ ಆಶಯವಾಗಿದೆ.
- ವಿಠ್ಠಲ ಆರ್. ಬಲಕುಂದಿ




