ಸವಾಲು, ಪ್ರತಿಸವಾಲಿನ ಹಿಂದೆ ಹೊರಬಿತ್ತು ಸ್ಪೋಟಕ ವಿಷಯ

ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸವಾಲು‌ ಹಾಕಿದ್ದೆ ಈಗ ಶಾಸಕ ಜೆ.ಟಿ. ಪಾಟೀಲರಿಗೆ ವರದಾನವಾಗಿ ಪರಿಣಮಿಸಿದೆ. ಇದಕ್ಕೆ ಕಾರಣವೂ ಇದೆ. ಬೀಳಗಿ ಶಾಸಕ ಜೆ.ಟಿ.‌ ಪಾಟೀಲ 2028 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದರಂತೆ.

ಸ್ವತಃ ಜೆ.ಟಿ. ‌ಪಾಟೀಲರು ಈ ಕುರಿತು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಇದು ಬೀಳಗಿ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನವನ್ನುಂಟು‌ ಮಾಡಿದೆ. ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಫರ್ಧಿಸುವುದಿಲ್ಲ ಎಂದು ಹೇಳಿಕೊಂಡಿದ್ದರು ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆಗ ಅವರು ” ನಾನು ಹಾಗೆ ಹೇಳಿಯೇ ಇಲ್ಲ. ಹೇಳಿದ್ದರೆ ಸಾಕ್ಷಿಕೊಡಿ” ಎನ್ನುವ ಮಾತನ್ನು ಹೇಳಿ ವಿಷಯವನ್ನು ತಣ್ಣಗಾಗಿಸಿದ್ದರು.

28ರಲ್ಲಿ ಸ್ಪರ್ಧೆಗೆ ಸಿದ್ಧ:

ಈಗ ಹಾಗಲ್ಲ. ಸ್ವತಃ ಅವರು ಪತ್ರಿಕಾಗೋಷ್ಠಿಯಲ್ಲಿ 28 ರ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ ಎನ್ನುವ ಮಾತನ್ನು ಬಹಿರಂಗ ಪಡಿಸಿದ್ದಾರೆ. ಜತೆಗೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ರಾಜೀನಾಮೆ ಕೇಳುವ ಮೂಲಕ ತಮ್ಮನ್ನು ಬಡಿದೆಬ್ಬಿಸಿದ್ದಾರೆ. ಪಕ್ಷ ಒಪ್ಪಿದಲ್ಲಿ 28 ರ ವಿಧಾನಸಭೆ ಚುನಾವಣೆಯಲ್ಲಿ ಅವರ ವಿರುದ್ಧ ತಾವೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ.

ನುಂಗಲಾರದ ತುತ್ತಾದ ಹೇಳಿಕೆ:

ಶಾಸಕ ಜೆ.ಟಿ. ಪಾಟೀಲರ ಈ ಹೇಳಿಕೆ ಬೀಳಗಿ ಕಾಂಗ್ರೆಸ್ ವಲಯದಲ್ಲಿ ಅನೇಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2018 ರ ಚುನಾವಣೆ ವೇಳೆಯೇ ಜೆ.ಟಿ.‌ ಪಾಟೀಲರು, ಬೀಳಗಿ ಕ್ಷೇತ್ರದಿಂದ ಬೇರೆಯವರ ಸ್ಪರ್ಧೆಗೆ ಅವಕಾಶ ಮಾಡಿಕೊಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅವರು ಸ್ಪರ್ಧೆಯಿಂದ ಸರಿಯುವ ಕುರಿತು ಯಾರಿಗೂ ಪ್ರಮಾಣ ಮಾಡಿಲ್ಲ.‌ ಆ ಕುರಿತು ದಾಖಲೆ ಇದ್ದರೆ ಕೊಡಿ ಎಂದು ಪ್ರಶ್ನಿಸಿದಾಗ ಅದು ಪಕ್ಷದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಕೆಲವರು ಇವರ ನಡೆಗೆ ಬೇಸತ್ತು ಪಕ್ಷ ತೊರೆದದ್ದು ಇದೆ. ಕೊನೆಗೆ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ಸ್ಪರ್ಧಿಸಿ ಗೆದ್ದರು. ಆ ಮಾತು ಬೇರೆ.

ಉತ್ಸಾಹಕ್ಕೆ ತಣ್ಣೀರು:

28 ರ ವಿಧಾನಸಭೆ ಚುನಾವಣೆಯಲ್ಲಿ ತಮಗೊಂದು ಅವಕಾಶ ಸಿಗಬಹುದು ಎನ್ನುವ ಅದಮ್ಯ ಉತ್ಸಾಹ ಹಾಗೂ ನಿರೀಕ್ಷೆಯಲ್ಲಿಯೇ ಕೆಲವರು ಬೀಳಗಿ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ. ಅಂತವರ ಪಾಲಿಗೆ ಸೋಮವಾರ ಶಾಸಕ ಜೆ.ಟಿ.‌ ಪಾಟೀಲರು ನೀಡಿರುವ ಹೇಳಿಕೆ ಭಾರಿ ಶಾಕ್ ನೀಡಿದೆ.

ಶಾಸಕ ಜೆ.ಟಿ.‌ ಪಾಟೀಲರು ನಾಲ್ಕು ಬಾರಿ ಶಾಸಕರಾದವರು. ಪಕ್ಷದಲ್ಲಿ ಉತ್ತಮ‌ ಇಮೇಜ್ ಇಟ್ಟುಕೊಂಡವರು. ಮೇಲಾಗಿ ಅವರು ಹಾಲಿ ಶಾಸಕರಾಗಿದ್ದವರು. ಅವರಾಗಲೇ ಚುನಾವಣೆಗೆ ನಿಲ್ಲಲಾರೆ ಎಂದು ಹೇಳಿದಲ್ಲಿ ಮಾತ್ರ ಪಕ್ಷ ಬೇರೆ ಅಭ್ಯರ್ಥಿ ಬಗೆಗೆ ವಿಚಾರ ಮಾಡುವ ಸ್ಥಿತಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ರಾಜೀನಾಮೆ ಸವಾಲು ಒಂದರ್ಥದಲ್ಲಿ ಜೆ.ಟಿ.‌ಪಾಟೀಲರಿಗೆ ವರದಾನವೇ ಆದಂತಾಗಿದೆ.

ಅಸಮಾಧಾನಕ್ಕೆ ಮುನ್ನಡಿ:

ಮೇಲ್ನೋಟಕ್ಕೆ ಇದು ವರದಾನದಂತೆ ಕಾಣಿಸಿಕೊಂಡರೂ ಪಕ್ಷದಲ್ಲಿ ಆಂತರಿಕ ಅಸಮಾಧಾನ ಹುಟ್ಟಿಗೆ ಮುನ್ನುಡಿ ಬರೆದರೂ ಅಚ್ಚರಿ ಪಡಬೇಕಿಲ್ಲ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ. 28 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಒಪ್ಪಿದಲ್ಲಿ ನಾನೇ ಅಭ್ಯರ್ಥಿ ಎಂದು ಶಾಸಕ ಜೆ.ಟಿ. ಪಾಟೀಲರು ನೀಡಿರುವ ಬಹಿರಂಗ ಹೇಳಿಕೆ ಆತುರದ ನಡೆ ಆಯಿತೇನೋ ಎನ್ನುವ ಯಕ್ಷಪ್ರಶ್ನೆಯನ್ನೂ ಜತೆಜತೆಗೆ ಹುಟ್ಟು ಹಾಕಿದೆ.

ಬೀಳಗಿ ಕಾಂಗ್ರೆಸ್ ಪಾಳೆಯದಲ್ಲಿ ಭವಿಷ್ಯದ ದಿನಗಳಲ್ಲಿ ಏನೇ ಬೆಳವಣಿಗೆಗಳಾದರೂ ರಾಜಕೀಯ ಹೇಳಿಕೆ, ಪ್ರತಿ ಹೇಳಿಕೆ ಮೇಲಾಟದಲ್ಲಿ ಮಾಜಿ ಸಚಿವ ನಿರಾಣಿ ಅವರು ಹಾಕಿದ ಸವಾಲು, 28 ರ ಚುನಾವಣೆಯಲ್ಲಿ ಮತ್ತೊಮ್ಮೆ ಜೆ.ಟಿ. ಪಾಟೀಲರನ್ನು ಸ್ಪರ್ಧೆಗೆ ಬಡಿದೆಬ್ಬಿಸಿದೆ. ಹಾಗಾಗಿ
ಬೀಳಗಿ ಕಾಂಗ್ರೆಸ್ ಪಾಳೆಯದಲ್ಲಿನ ಮುಂದಿನ ಬೆಳವಣಿಗೆಗಳನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top