ನಿರಾಣಿ ವಿರುದ್ಧ ಸ್ಪರ್ಧೆಗೆ ಸಿದ್ದ: ಜೆಟಿ

ಬಾಗಲಕೋಟೆ: ಪಕ್ಷ ಒಪ್ಪಿಗೆ ಸೂಚಿಸಿದಲ್ಲಿ ೨೦೨೮ ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಸ್ಪರ್ಧೆಗೆ ಸಿದ್ದ ಎಂದು ಶಾಸಕ ಜೆ.ಟಿ.‌ ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

2028 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಮಾಜಿ ಸಚಿವ ನಿರಾಣಿ ಅವರು ತಮ್ಮನ್ನು ಭ್ರಷ್ಟಾಚಾರಿ ಎಂದು ಆರೋಪಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ ಎಂದು ಹಾಕಿರುವ ಸವಾಲನ್ನು‌ ಸ್ವೀಕರಿಸಲು ಸಿದ್ದನಿದ್ದೇನೆ. ಆದರೆ ಪಕ್ಷದ ಕಾರ್ಯಕರ್ತರು ಜನ ನಿಮ್ಮನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದಾರೆ. ಯಾರೋ ಏನೋ ಅಂದರು ಅಂತ ರಾಜೀನಾಮೆ ನೀಡುವುದು ಸರಿಯಲ್ಲ. ಪಕ್ಷ ಕೇಳಿದರೆ ರಾಜೀನಾಮೆ ಕೊಡಿ. ಕಾರ್ಯಕರ್ತರು ಕೇಳಿದರೆ ರಾಜೀನಾಮೆ ಕೋಡಿ ಎಂದು ಹೇಳುತ್ತಿದ್ದಾರೆ. ಹಾಗಾಗಿ ಮುಂದಿನ ಬಾರಿ ಸ್ಪರ್ಧಿಸಬಾರದು ಅಂದು ಕೊಂಡಿದ್ದೆ.‌ ಅವರು ಸವಾಲು ಹಾಕಿದ್ದರಿಂದ‌ ಮತ್ತೆ ಸ್ಪರ್ಧಿಸಬೇಕು ಎನ್ನುವ ಕಿಚ್ಚು ಹೊತ್ತಿಕೊಂಡಿದೆ ಎಂದರು.

ನಿರಾಣಿ ಹೆಸರು ಹೇಳಿಲ್ಲ :

ಬಿಹಾರದಲ್ಲಿ‌ ಮತಗಳ್ಳತನ ವಿಚಾರ ಪ್ರಸ್ತಾಪವಾದ ಹಿನ್ನೆಲೆಯಲ್ಲಿ 21 ವರ್ಷಗಳ ಹಿಂದೆ ಬೀಳಗಿ ಕ್ಷೇತ್ರದಲ್ಲಿ ನಡೆದ ನಕಲಿ ಮತಗಳ ವಿಷಯ‌ ಪ್ರಸ್ತಾಪಿಸಿದ್ದೇನೆ. ಅದರಲ್ಲಿ ನಿರಾಣಿ ಅವರ ಹೆಸರು ಹೇಳಿಲ್ಲ. ಇನ್ನೊಬ್ಬರ ಬಗೆಗೆ ಆರೋಪ‌ ಮಾಡುವಾಗ ಎಚ್ಚರಿಕೆಯಿಂದ‌‌ ಮಾತನಾಡಬೇಕು ಎಂದರು.

ನಿರಾಣಿ ಅವರು ತಮ್ಮನ್ನು ಭ್ರಷ್ಟಾಚಾರಿ ಎಂದು ಆರೋಪಿಸಿರುವುದು ನಿರಾಕರಿಸಿದ ಅವರು ಯಾರಿಂದಲೂ ಹಣ ಪಡೆದಿಲ್ಲ. ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರ ಒತ್ತಾಸೆಯಿಂದಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಕೆಲ ಬದಲಾವಣೆ ಮಾಡಿದ್ದೇನೆ. ಅಗತ್ಯ ಕಡೆಗಳಲ್ಲಿ ಅನುದಾನ ಬಳಕೆ ಮಾಡಲಾಗಿದೆ ಎಂದರು.

೪೦ ಕೋಟಿ ರೂ.‌ ಅಭಿವೃದ್ಧಿ ಕಾಮಗಾರಿ ಬದಲಾಯಿಸಿದ್ದಾರೆ ಎಂದು ಅರೋಪಿಸಿದ್ದರು. ಇದು ಸುಳ್ಳು, ಅಗತ್ಯ ಕಡೆಗಳಲ್ಲಿ ಬದಲಾಯಿಸಿದ್ದೇವೆ ಎಂದು ಅವರು ಸ್ಪಷ್ಟ ಪಡಿಸಿದರು.

ರಕ್ತ ಕುಡಿವ ಕಾರ್ಖಾನೆಗಳು:

ರಾಜ್ಯದಲ್ಲಿ ರೈತರ ರಕ್ತ ಕುಡಿವ ಸಕ್ಕರೆ ಕಾರ್ಖಾನೆಗಳು ಇವೆ. ಕಾರ್ಖಾನೆಗಳಿಗೆ ರೈತರು ಸಾಗಿಸುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿವೆ. ಮಾಜಿ ಸಚಿವ ನಿರಾಣಿ ಅವರ ಕಾರ್ಖಾನೆಗಳು ಇವೆ. ಅವರು ಪ್ರಾಮಾಣಿಕರು ಎನ್ನುವುದನ್ನು ಸಾಬೀತು ಪಡಿಸಲು ತಮ್ಮ ಕಾರ್ಖಾನೆಗಳ‌ ಮುಂದೆ ಮಾನವ ರಹಿತ ತೂಕದ ಯಂತ್ರಗಳನ್ನು ಅಳವಡಿಸಲಿ. ಆಗ ಅವರ ಕಾರ್ಯವನ್ನು ರೈತರಷ್ಟೆ ಅಲ್ಲ ಸ್ವತಃ ತಾವೂ ಕೂಡ ಶ್ಲಾಘಿಸುವುದಾಗಿ ಅವರು ಹೇಳಿದರು.

ನಮ್ಮ ಕುಟುಂಬದವರು ಆರಂಭಿಸಿದ್ದ ಮನಾಲಿ ಸಕ್ಕರೆ ಕಾರ್ಖಾನೆಯಲ್ಲಿ ತಮ್ಮದು ಒಂದುಪೈಸೆ ಷೇರು ಇಲ್ಲ. ಕಾರ್ಖಾನೆ ಸ್ಥಾಪನೆ ಮಾಡುವಾಗಲೇ ಬೇಡ ಎಂದು ಹೇಳಿದ್ದೆ. ಅದರ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಿದ್ದು ಬಿಟ್ಟರೆ ಅಲ್ಲಿಗೆ ಹೋಗಿಯೇ ಇಲ್ಲ ಎಂದು ನಿರಾಣಿ ಅವರ ದೂರಿಗೆ ಸ್ಪಷ್ಟನೆ ನೀಡಿದರು.

ಆಸ್ತಿ ತನಿಖೆ ಆಗಲಿ :

ಜಿಲ್ಲೆಯ ನಂಬರ್ ಒನ್ ಭಷ್ಟಾಚಾರಿ ಎಂದು ನಿರಾಣಿ ಅವರಿ ಆರೋಪಿಸಿದ್ದು, ಅವರು ಶಾಸಕರಾಗುವ ಮುನ್ನ ಎಷ್ಟು ಆಸ್ತಿ ಇತ್ತು ಎನ್ನುವ ತನಿಖೆ ಆಗಲಿ, ಆಗ ಯಾರ ಭ್ರಷ್ಟರು ಎನ್ನುವುದು ಜನತೆಗೆ ಗೊತ್ತಾಗಲಿ ಎಂದರು.

ಇಂದಿರಾಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಟೀಕೆ ಮಾಡುವ ಮುನ್ನ ಸ್ಥಾನಮಾನ ಅರಿತು ಮಾತನಾಡಬೇಕು. ಆಗ ಟೀಕೆಗೂ ಒಂದು ಮೌಲ್ಯ ಬರುತ್ತದೆ. ಬೇಜಬ್ದಾರಿ ಹೇಳಿಕೆ ನೀಡುವುದು ಅವರ ಚಾಳಿ ಆಗಿದೆ ಎಂದು ಜೆ.ಟಿ.‌ಪಾಟೀಲರು‌ ನಿರಾಣಿ ವಿರುದ್ಧ ಹರಿಹಾಯ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರಿಂದ ಇಂದು ಪಾಠ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಭ್ರಷ್ಟರು ಯಾರೆಂದು ಜನತೆಗೆ ಗೊತ್ತಿದೆ :

ಕುಟುಂಬ ರಾಜಕಾರಣದ ಬಗೆಗೆ ಮಾತನಾಡಿದ ಅವರು ತಾವೆಂದೂ ಕುಟುಂಬ ರಾಜಕಾರಣ ಮಾಡಿಲ್ಲ. ನಮ್ಮಲ್ಲಿ ಯಾರೂ ರಾಜಕೀಯಕ್ಕೆ ಬಂದಿಲ್ಲ. ಚುಣಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದಾರೆ ಎಂದರು. ಯಾರು ಭ್ರಷ್ಟರು ಎನ್ನುವುದನ್ನು ಜನ ಈಗಾಗಲೇ ನಿರ್ಧರಿಸಿಯೇ ತಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ಟಾಂಗ್ ನೀಡುವ ಮೂಲಕ ನಿರಾಣಿ‌ ಅವರೇ ಭ್ರಷ್ಟರು ಎಂದು ಪರೋಕ್ಷವಾಗಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ೧೫ ಕೋಟಿ ಖರ್ಚು ಮಾಡಿರುವ ಬಗೆಗೆ ಆರೋಪ ಮಾಡಿದ್ದಾರೆ. ಅವರು ಅದನ್ನಿ ಸಾಬೀತು ಪಡಿಸಲಿ, ಗಾಳಿಯಲ್ಲಿ ಗುಂಡು ಹೋಡೆಯುವ ಕೆಲಸ ಬಿಡಲಿ ಎಂದು ಕಿವಿಮಾತು‌ ಹೇಳಿದರು.

ಮುಖಂಡರಾದ ಎಂ.ಎಲ್.ಕೆಂಪಲಿಂಗಣ್ಣವರ, ಮಹಾದೇವ ಹಾದಿಮನಿ, ಹಣಮಂತ ಕಾಖಂಡಕಿ ಇತರರು ಇದ್ದರು.

Scroll to Top